Story: ಪಾರಿವಾಳ ಮತ್ತು ಇರುವೆ

Pigeon and Ant

ಪಾರಿವಾಳ ಮತ್ತು ಇರುವೆ

Pārivāḷa mattu iruve

 

ನದಿಯ ದಡದ ಮೇಲೆ ಒಂದು ಇರುವೆ ಹೋಗುತ್ತ ಇತ್ತು. ಅದು ಗಾಳಿಯಲ್ಲಿ ಹಾರಿ ನೀರಿಗೆ ಬಿತ್ತು. ಆಗ ಅದು ದಡವನ್ನು ಸೇರಲು ಬಹಳ ಪ್ರಯತ್ನಿಸಿತು. ಆದರೆ ದಡಕ್ಕೆ ಬರಲು ಆಗಲಿಲ್ಲ. ಮುಳುಗಿ ಹೋಗುವೆನೆಂದು ಅದಕ್ಕೆ ದು:ಖವಾಯಿತು.

 

ನದಿಯ ದಡದಲ್ಲಿ ಒಂದು ಮರವಿತ್ತು. ಆ ಮರದಲ್ಲಿ ಒಂದು ಪಾರಿವಾಳ ಕುಳಿತಿತ್ತು. ಅದು ಆ ಇರುವೆಯನ್ನು ನೋಡಿತು. ಅದರ ಕಷ್ಟವನ್ನು ತಿಳಿಯಿತು. ಕೂಡಲೆ ಒಂದು ಎಲೆಯನ್ನು ತನ್ನ ಕೊಕ್ಕಿನಲ್ಲಿ ಹಿಡಿಯಿತು. ಇರುವೆಯ ಹತ್ತಿರ ಹಾರಿತು.

 

ಅದರ ಹತ್ತಿರ ಹೋಗಿ ಎಲೆಯನ್ನು ಹಿಡಿಯಿತು. ಇರುವೆಯು ಆ ಎಲೆಯ ಮೇಲೆ ಹತ್ತಿ ಕುಳಿತಿತು. ಪಾರಿವಾಳವು ಆ ಎಲೆಯನ್ನು ದಡಕ್ಕೆ ತಂದು ಇರುವೆಯನ್ನು ನೆಲದ ಮೇಲೆ ಇಳಿಸಿತು. ಇರುವೆಯ ಜೀವ ಉಳಿಯಿತು.

 

ಇರುವೆ ಆನಂದದಿಂದ ಪಾರಿವಾಳಕ್ಕೆ “ಗೆಳೆಯ, ನೀನು ನನ್ನ ಪ್ರಾಣ ಉಳಿಸಿರುವೆ. ನಿನ್ನಿಂದ ತುಂಬಾ ಉಪಕಾರವಾಯಿತು”, ಎಂದು ಹೇಳಿ ಕೈಮುಗಿದು ಹೋಯಿತು.

ಕೆಲವು ದಿನಗಳು ಕಳೆದವು. ಒಂದು ದಿನ ಪಾರಿವಾಳವು ಮರದ ಮೇಲೆ ಕುಳಿತಿತ್ತು. ಅದನ್ನು ಹಿಡಿಯಲೆಂದು ಗಿಡುಗ ಹಕ್ಕಿಯೊಂದು ಮೇಲೆ ಆಕಾಶದಲ್ಲಿ ಹಾರಾಡುತ್ತಿತ್ತು. ಅದೇ ಕಾಲಕ್ಕೆ ಕೆಳಗೆ ಬೇಟೆಗಾರನೊಬ್ಬನು ಪಾರಿವಾಳಕ್ಕೆ ಗುರಿಯಿಟ್ಟಿದ್ದನು. ಬಿಲ್ಲಿಗೆ ಬಾಣವನ್ನು ಹೂಡಿದ್ದನು. ಇದನ್ನು ಇರುವೆಯು ಕಂಡಿತು. ತನ್ನ ಗೆಳೆಯನು ಕಷ್ಟದಲ್ಲಿ ಸಿಕ್ಕಿರುವನೆಂದು ತಿಳಿಯಿತು. ಕೂಡಲೆ ಓಡುತ್ತ ಹೋಯಿತು. ಬೇಟೆಗಾರನ ಕಾಲನ್ನು ಬಲವಾಗಿ ಕಚ್ಚಿತು. ಆದರಿಂದ ಅವನ ಗುರಿ ತಪ್ಪಿತು. ಮೇಲೆ ಆಕಾಶದಲ್ಲಿ ಹಾರಾಡುತ್ತಿದ್ದ ಗಿಡುಗನಿಗೆ ಬಾಣ ತಾಗಿತು. ಗಿಡುಗ ಸತ್ತಿತು. ಪಾರಿವಾಳ ಬದುಕಿತು.

 

ಕಷ್ಟದಿಂದ ಪಾರಾದ ಪಾರಿವಾಳವು ಇರುವೆ ಹತ್ತಿರ ಬಂದು ನಮಿಸಿ “ನೀನು ಒಳ್ಳೆಯ ಗೆಳೆಯ, ಉಪಕಾರವನ್ನು ತೀರಿಸಿದೆ” ಎಂದು ಹೇಳಿತು. ಆನಂದದಿಂದ ಹಾರಿಹೋಯಿತು.

 

--x--

Last modified: Sunday, 7 October 2018, 11:59 PM